ಶಾಮಶಾಸ್ತ್ರೀ, ಆರ್  	1868-1944. ಪ್ರಸಿದ್ಧ ವಿದ್ವಾಂಸರು; ಸಂಶೋಧಕರು. 1868 ಜನವರಿ 12ರಂದು ರುದ್ರಪಟ್ಟಣದಲ್ಲಿ ಜನಿಸಿದರು.  ಚಿಕ್ಕಂದಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಇವರು ಸ್ವಪ್ರಯತ್ನದಿಂದ ಅಭಿವೃದ್ಧಿಗೆ ಬಂದರು.  ಮೈಸೂರು ಮಹಾರಾಜ ಸಂಸ್ಕøತ ಕಾಲೇಜಿನಲ್ಲಿ ಓದಿ 1891ರಲ್ಲಿ ಸಂಸ್ಕøತ ಸಾಹಿತ್ಯದಲ್ಲಿ ವಿದ್ವತ್ಪರೀಕ್ಷೆ ಮಾಡಿದರು.  ಆಗಿನ ದಿವಾನರಾಗಿದ್ದ ಕೆ. ಶೇಷಾದ್ರಿ ಅಯ್ಯರ್ ಅವರು ಇವರ ಪಾಂಡಿತ್ಯ ವನ್ನು ಮೆಚ್ಚಿ, ಸಂಸ್ಕøತ ಗ್ರಂಥಗಳನ್ನು ಓದಿಸಿ ಕೇಳುವುದಕ್ಕೆಂದು ಇವರನ್ನು ತಮ್ಮ ಮನೆಯಲ್ಲಿಯೇ ಇಟ್ಟುಕೊಂಡರು; ಇವರ ಇಂಗ್ಲಿಷ್ ವ್ಯಾಸಂಗಕ್ಕೂ ಅನುಕೂಲ ಮಾಡಿಕೊಟ್ಟರು. ಅವರ ಮನೆಯಲ್ಲಿದ್ದ ಸುಮಾರು ಹತ್ತು ವರ್ಷಗಳ ಅವಧಿಯಲ್ಲಿ ಇವರು ಇಂಗ್ಲಿಷ್ ಮತ್ತು ಸಂಸ್ಕøತ ಭಾಷೆಗಳ ಅಧ್ಯಯನದ ಜೊತೆಗೆ ಭೌತಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಅಧ್ಯಯನ ಮಾಡಿ 1899ರಲ್ಲಿ ಮದರಾಸು ವಿಶ್ವವಿದ್ಯಾಲಯದ ಬಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅನಂತರ ಶೇಷಾದ್ರಿ ಅಯ್ಯರ್ ಅವರ ನೆರವಿನಿಂದಲೇ 1900ರಲ್ಲಿ ಮೈಸೂರಿನ ಪ್ರಾಚೀನ ಪುಸ್ತಕ ಭಂಡಾರದಲ್ಲಿ ಉದ್ಯೋಗಸ್ಥರಾದರು. ಆ ಪುಸ್ತಕ ಭಂಡಾರದ ಹಸ್ತಪ್ರತಿಗಳ ಗ್ರಂಥಸೂಚಿ ಯನ್ನು ತಯಾರಿಸುತ್ತಿದ್ದಾಗ, ಅಂದಿನವರೆಗೆ ನಾಮಮಾತ್ರ ಪ್ರಸಿದ್ಧವಾಗಿದ್ದು ಗ್ರಂಥಲಿಪಿಯಲ್ಲಿದ್ದ ಕೌಟಿಲ್ಯನ ಅರ್ಥಶಾಸ್ತ್ರ ಇವರಿಗೆ ದೊರೆಯಿತು.  ಈ ಗ್ರಂಥದ ಮಹತ್ತ್ವವನ್ನರಿತ ಇವರು ಅದನ್ನು ಪರಿಷ್ಕರಿಸಿ 1909ರಲ್ಲಿ ಪ್ರಕಟಿಸಿ ಪ್ರಸಿದ್ಧರಾದರು. 1912ರ ವೇಳೆಗೆ ಈ ಗ್ರಂಥದ ಇಂಗ್ಲಿಷ್ ಭಾಷಾಂತರವನ್ನೂ ಪ್ರಕಟಿಸಿದರು. 1912-18 ವರೆಗೆ ಇವರು ಬೆಂಗಳೂರಿನ ಲ್ಲಿರುವ ಚಾಮರಾಜ ಸಂಸ್ಕøತ ಮಹಾ ಪಾಠಶಾಲೆಯ ಅಧ್ಯಕ್ಷರಾಗಿದ್ದರು.  1918ರಲ್ಲಿ ಮೈಸೂರು ಸರ್ಕಾರದ ಪ್ರಾಚೀನ ಪುಸ್ತಕ ಭಂಡಾರದ ಕ್ಯೂರೇಟರ್ ಆದರು. 1922ರಲ್ಲಿ ಇವರು ಪ್ರಾಚ್ಯವಸ್ತು ಸಂಶೋಧನ ಇಲಾಖೆಯ ನಿರ್ದೇಶಕರಾಗಿ ನೇಮಕಗೊಂಡರು.  ಕೆಲಕಾಲ ಇವರು ಮೈಸೂರು ವಿಶ್ವವಿದ್ಯಾನಿಲಯದ ಇತಿಹಾಸ ಪ್ರಾಧ್ಯಾಪಕರಾಗಿಯೂ ಕೆಲಸಮಾಡಿ 1928ರಲ್ಲಿ ನಿವೃತ್ತರಾದರು.

	ಇವರು ಮೈಸೂರಿನ ಮಹಾರಾಜ ಸಂಸ್ಕøತ ಮಹಾಪಾಠಶಾಲೆಯ ಕಾರ್ಯಕಾರಿ ಸಮಿತಿ ಮತ್ತು ಸಂಸ್ಕøತ ವಿದ್ವತ್ಪರೀಕ್ಷಾ ಮಹಾಸಭೆಯ ಸದಸ್ಯರಾಗಿಯೂ ಇದ್ದು ಸಂಸ್ಕøತ ಭಾಷಾವ್ಯಾಸಂಗದ ಪುರೋಭಿವೃದ್ಧಿ ಗಾಗಿ ದುಡಿದರಲ್ಲದೆ, ಸಂಸ್ಕøತ ಭಾಷೆಯ ಪ್ರಚಾರಕ್ಕಾಗಿ ಆರ್ಯಧ ರ್ಮೋಜ್ಜೀವಿನೀ ಸಭಾ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ಅಧ್ಯಕ್ಷರಾಗಿಯೂ ಕೆಲಸ ಮಾಡಿದರು.

ಸಂಸ್ಕøತ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಜೊತೆಗೆ ಜ್ಯೋತಿಷ ಶಾಸ್ತ್ರದಲ್ಲೂ ಅಪಾರ ಪರಿಶ್ರಮವನ್ನು ಹೊಂದಿದ್ದ ಇವರು ಮಾಡಿರುವ ಸಾಹಿತ್ಯಸೇವೆ ಮೇಲ್ಮಟ್ಟದ್ದು; ಸಾರವತ್ತಾದದ್ದು. 1908ರಲ್ಲಿ ಗವಾಂ ಅಯನ ದಿ ವೇದಿಕ್ ಈರ ಎಂಬ ವೇದಗಳಲ್ಲಿ ಯುಗಗಳ ವಿಚಾರವನ್ನು ಕುರಿತ ಗ್ರಂಥವನ್ನೂ 1912ರಲ್ಲಿ ಕೌಟಿಲ್ಯನ ಅರ್ಥಶಾಸ್ತ್ರದ ಭಾಷಾಂತರ ವನ್ನೂ 1922-28ರ ವರೆಗೆ ಪ್ರಾಚ್ಯವಸ್ತು ಸಂಶೋಧನ ಇಲಾಖೆಯ ವರದಿಗಳಲ್ಲಿ ಅನೇಕ ಅಮೂ ಲ್ಯವಾದ ಲೇಖನಗಳನ್ನೂ 1926-28ರ ವರೆಗೆ ಮಹಾ ವೀರನ ಸೂರ್ಯಪ್ರಜ್ಞಪ್ತಿಯ ಇಂಗ್ಲಿಷ್ ಅನುವಾದವನ್ನೂ 1936ರಲ್ಲಿ ವೇದಾಂಗ ಜ್ಯೋತಿಷ ಎಂಬ ಗ್ರಂಥದ ಇಂಗ್ಲಿಷ್ ಅನುವಾದ ಮತ್ತು ಸಂಸ್ಕøತ ವ್ಯಾಖ್ಯೆಯನ್ನೂ 1938ರಲ್ಲಿ ದ್ರಪ್ಸ, ದಿ ವೇದಿಕ್ ಸೈಕಲ್ ಆಫ್ ಎಕ್ಲಿಪ್ಸಸ್ ಎಂಬ ಗ್ರಂಥವನ್ನೂ 1940 ರಲ್ಲಿ ದಿ ಎಕ್ಲಿಪ್ಸ್ ಇನ್ ದಿ ವೇದಾಸ್, ದಿ ಬೈಬಲ್ ಮತ್ತು ಕುರಾನ್ ಎಂಬ ಗ್ರಂಥಗಳನ್ನೂ ಪ್ರಕಟಿಸಿದರು. 1939 ಮತ್ತು 1941ರಲ್ಲಿ ಇವರು ಪ್ರಕಟಿಸಿದ ಸೌತ್ ಇಂಡಿಯನ್ ಇನ್‍ಸ್ಕ್ರಿಪ್‍ಷನ್ಸ್ ಎಂಬ ಕನ್ನಡ ಶಾಸನಗಳ ಸಂಕಲನ ಮೈಸೂರು ಸರ್ಕಾರದ ಪ್ರಾಚ್ಯವಸ್ತು ಸಂಶೋಧನ ಇಲಾಖೆಗೆ ಇವರ ಅಮೂಲ್ಯ ಕೊಡುಗೆಯಾಗಿದೆ. ಇವೆಲ್ಲವುಗಳ ಜೊತೆಗೆ ಇವರು ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ವಿಮರ್ಶಾತ್ಮಕವಾದ ಅನೇಕ ಪ್ರೌಢಲೇಖನ ಗಳನ್ನು ಪ್ರಸಿದ್ಧ ಪಂಡಿತಪತ್ರಿಕೆಗಳಲ್ಲಿ ಪ್ರಕಟಿಸಿದ್ದರು.

	ಇವರು ಪ್ರಾಚೀನ ಪುಸ್ತಕಭಂಡಾರದ ಕ್ಯೂರೇಟರ್ ಆಗಿದ್ದಾಗ ಇವರ ನೇತೃತ್ವದಲ್ಲಿ ಸಂಶೋಧನೆಯಾಗಿ ಪ್ರಕಟವಾಗಿರುವ ಸಂಸ್ಕøತ ಗ್ರಂಥಗಳಿವು: ಬ್ರಹ್ಮಸೂತ್ರಭಾಷ್ಯ (ಆನಂದತೀರ್ಥೀಯ) ತಾತ್ಪರ್ಯ ಚಂದ್ರಿಕೆಯೊಡನೆ, ಭಾಗ 3, ಕೌಟಿಲ್ಯನ ಅರ್ಥಶಾಸ್ತ್ರ (ಎರಡನೆಯ ಮುದ್ರಣ), ಬೋಧಾಯನಗೃಹ್ಯಸೂತ್ರ (ಪರಿಶಿಷ್ಟದೊಡನೆ) ಸ್ಮøತಿಚಂದ್ರಿಕಾ, ಆಶೌಚಖಂಡ, ತೈತ್ತಿರೀಯಬ್ರಾಹ್ಮಣ (ಅಷ್ಟಕ) ಭಾಗ 2, ಭಟ್ಟ ಭಾಸ್ಕರ ಮತ್ತು ಸಾಯಣ ಭಾಷ್ಯಗಳೊಡನೆ, ಅಲಂಕಾರ ಭಾಗ ಮಣಿಹಾರ, ಭಾಗ 2, ಬ್ರಹ್ಮಸೂತ್ರಭಾಷ್ಯ (ಆನಂದ ತೀರ್ಥೀಯ) ತಾತ್ಪರ್ಯ ಚಂದ್ರಿಕೆಯೊಡನೆ, ಭಾಗ 4, ಕಾವ್ಯಪ್ರಕಾಶ, ಸಂಕೇತ, ವ್ಯಾಖ್ಯಾನದೊಡನೆ, ಆಯುರ್ವೇದಸೂತ್ರ, ಯೋಗಾನಂದನಾಥ ಭಾಷ್ಯದೊಡನೆ, ಅಲಂಕಾರ ಮಣಿಹಾರ, ಭಾಗ 3, ವಿದ್ಯಾಮಾಧವೀಯ-ವಿಷ್ಣುಶರ್ಮನ ಮುಹೂರ್ತ ದೀಪಿಕಾ ವ್ಯಾಖ್ಯಾನದೊಡನೆ, ಭಾಗ 1, ಕೌಟಿಲ್ಯನ ಅರ್ಥಶಾಸ್ತ್ರ (ಮೂರನೆಯ ಮುದ್ರಣ), ಅರ್ಥಶಾಸ್ತ್ರಪದಸೂಚಿ, ಭಾಗ 1, ಅರ್ಥಶಾಸ್ತ್ರಪದಸೂಚಿ, ಭಾಗ 2, ವಿದ್ಯಾಮಾಧವೀಯ (ವಿಷ್ಣುಶರ್ಮನ ಮುಹೂರ್ತದೀಪಿಕೆಯೊಡನೆ, ಭಾಗ 2) ಅರ್ಥಶಾಸ್ತ್ರಪದಸೂಚಿ, ಭಾಗ 3, ಅಭಿಲಷಿತಾರ್ಥ ಚಿಂತಾಮಣಿ, ಭಾಗ 1, ವಿದ್ಯಾಮಾಧವೀಯ, ಭಾಗ 3, ಸರಸ್ವತೀವಿಲಾಸ (ವ್ಯವಹಾರಖಂಡ). ಇವುಗಳಲ್ಲದೆ ಕನ್ನಡದಲ್ಲೂ ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ: ಕುಮಾರವ್ಯಾಸನ ಮಹಾಭಾರತ (ವಿರಾಟಪರ್ವ), ಲಿಂಗಣ್ಣನ ಕೆಳದಿನೃಪವಿಜಯ, ಸೋಮರಾಜನ ಉದ್ಭಟಕಾವ್ಯ, ರುದ್ರಭಟ್ಟನ ಜಗನ್ನಾಥವಿಜಯ, ಕುಮಾರವ್ಯಾಸನ ಮಹಾಭಾರತ (ಉದ್ಯೋಗಪರ್ವ), ಸೋಮನಾಥನ ಅಕ್ರೂರಚರಿತೆ, ನಯಸೇನನ ಧರ್ಮಾಮೃತ, ಭಾಗ 1, ಕಂಠೀರವ ನರಸರಾಜವಿಜಯ, ನಯಸೇನನ ಧರ್ಮಾಮೃತ, ಭಾಗ 2.

	ಇವರು ವಿಖ್ಯಾತ ಭಾರತೀಯ ವಿದ್ವನ್ಮಣಿಗಳಾದ ಬಿ. ಎನ್. ಸೀಲ್, ರಾಧಾಕುಮುದ ಮುಖರ್ಜಿ, ಮಹಾಮಹೋಪಾಧ್ಯಾಯ ಹರಪ್ರಸಾದಶಾಸ್ತ್ರಿ ಮತ್ತು ಎಫ್. ಡಬ್ಲ್ಯು. ಥಾಮಸ್, ವಿನ್‍ಸೆಂಟ್ ಎ. ಸ್ಮಿತ್, ಎ. ಎ. ಮ್ಯಾಕ್‍ಡೊನೆಲ್, ಆರ್. ಟೆಂಪಲ್, ಎಲ್. ಡಿ. ಬಾರ್‍ನೆಟ್, ಎ. ಟಿ. ರುಡೋಫ್ ಖಾರ್ನಿಲೇ ಮೊದಲಾದ ಪಾಶ್ಚಾತ್ಯವಿದ್ವಾಂಸರ ಮನ್ನಣೆಗೆ ಪಾತ್ರರಾಗಿದ್ದರು.  ಇವರಿಗೆ ಸಂದ ಗೌರವಗಳ ಪಟ್ಟಿಯೂ ದೊಡ್ಡದೆ.  ಅಮೆರಿಕದ ವಾಷಿಂಗ್‍ಟನ್ ವಿಶ್ವವಿದ್ಯಾಲಯಕ್ಕೆ ಸೇರಿದ ಓರಿಯಂಟಲ್ ಯೂನಿವರ್ಸಿಟಿ ಫಿಲಸಾಫಿಕಲ್ ಸ್ಕೂಲ್ ಎಂಬ ಸಂಸ್ಥೆ 1919ರಲ್ಲಿ ಇವರಿಗೆ ಪಿಎಚ್.ಡಿ. ಪದವಿಯನ್ನು ಕೊಟ್ಟು ಗೌರವಿಸಿತು. 1921ರಲ್ಲಿ ಮುಂಬಯಿ ಶಾಖೆಯ ರಾಯಲ್ ಏಷಿಯಾಟಿಕ್ ಸೊಸೈಟಿ ಯುಕಾಂಪ್‍ಬೆಲ್ ಸ್ಮಾರಕ ಚಿನ್ನದ ಪದಕವನ್ನು ಕೊಟ್ಟು ಗೌರವಿಸಿತು.  ಕಲ್ಕತ್ತ ವಿಶ್ವವಿದ್ಯಾಲಯ ಡಾಕ್ಟರ್ ಆಫ್ ಫಿಲಾಸಫಿ ಪದವಿಯನ್ನು ನೀಡಿತು (1921). ಮೈಸೂರಿನ ಮಹಾರಾಜರು ಇವರಿಗೆ ಅರ್ಥಶಾಸ್ತ್ರ ವಿಶಾರದ ಎಂಬ ಪ್ರಶಸ್ತಿಯನ್ನೂ (1925) ಆಗಿನ ಬ್ರಿಟಿಷ್ ಸರ್ಕಾರ ಮಹಾಮಹೋಪಾಧ್ಯಾಯ ಎಂಬ ಪ್ರಶಸ್ತಿಯನ್ನೂ (1930) ಕಾಶಿಯಲ್ಲಿರುವ ಭಾರತಧರ್ಮ ಮಹಾಮಂಡಲಿಯವರು ವಿದ್ಯಾಲಂಕಾರ ಎಂಬ ಪ್ರಶಸ್ತಿಯನ್ನೂ ಮತ್ತು ಪಂಡಿತರಾಜ ಎಂಬ ಪ್ರಶಸ್ತಿಯನ್ನೂ ಕೊಟ್ಟು ಗೌರವಿಸಿದರು (1935). ಇವರು 1944 ಜನವರಿ 23ರಂದು ನಿಧನಹೊಂದಿದರು.	
											(ಕೆ.ವಿ.ಎಸ್.ಎಮ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ